ಕಮ್ಯೂನಿಸಂ, ಆದಿಮ : ಮಾನವನ ಇತಿಹಾಸದ ಆದಿಕಾಲದಲ್ಲಿ ಇತ್ತೆಂದು ಹೇಳಲಾದ ವ್ಯವಸ್ಥೆ. ನೆಲವೇ ಮುಂತಾಗಿ ಎಲ್ಲ ಆಸ್ತಿಗಳ ಸಮಾನ ಒಡೆತನವಿದ್ದ ಆಗಿನ ವ್ಯವಸ್ಥೆ ಕಾರ್ಲ್ಮಾಕ್ರ್ಸ್‌ ಬೋಧಿತ ಕಮ್ಯೂನಿಸಂ ಅನ್ನೇ ಹೋಲುತ್ತದಾದ್ದರಿಂದ ಇದನ್ನು ಆದಿಮ ಕಮ್ಯೂನಿಸಂ ಎಂದು ಕರೆಯಲಾಗಿದೆ. ಸಮಾಜ ವಿಕಾಸದ ಬಗ್ಗೆ 19ನೆಯ ಶತಮಾನದಲ್ಲಿ ಪ್ರತಿಪಾದಿತವಾದ ಸಿದ್ಧಾಂತಗಳ ಫಲವಾಗಿ ಈ ಪರಿಕಲ್ಪನೆ ಪ್ರಪ್ರಥಮವಾಗಿ ರೂಪುಗೊಂಡಿತು. ಸಮಕಾಲೀನರಾದ ಕೆಲವು ಆದಿಮ ಜನರ ಜೀವನ ವಿಧಾನಗಳನ್ನು ಗಮನಿಸಿ, ಇವು ಕಮ್ಯೂನಿಸಂ ಅನ್ನು ಹೋಲುವುದೆಂದು ಆದ್ದರಿಂದ ಮಾನವ ಇತಿಹಾಸದ ಆದಿ ಕಾಲದಲ್ಲಿ ಈ ಬಗೆಯ ಜೀವನ ಸಾರ್ವತ್ರಿಕವಾಗಿದ್ದಿರಬೇಕೆಂದು ಅನೇಕರು ವಾದಿಸಿದರು. ಇವರ ಪೈಕಿ ಡಬ್ಲ್ಯೂ.ಹೆಚ್. ಆರ್.ರಿವರ್ಸ್‌ ಮುಖ್ಯ. ಓಷಿಯಾನಿಯದ ಮೆಲನೇಷ್ಯದಲ್ಲಿರುವ ಜನರಲ್ಲಿ ಎರಡು ಬಗೆಯ ಕಮ್ಯೂನಿಸಂ ಅಥವಾ ಸಾಮೂಹಿಕ ಪದ್ಧತಿಗಳು ಇವೆಯೆಂದು ಆತ ಹೇಳಿದ್ದಾನೆ. ಒಂದು ಆಸ್ತಿಯ ಸಾಮೂಹಿಕ ಒಡೆತನ. ಲೈಂಗಿಕ ವಿಚಾರವನ್ನು ಕುರಿತದ್ದು ಇನ್ನೊಂದು. ನೆಲ, ದೋಣಿ ಮುಂತಾದುವುಗಳ ಒಡೆತನದ ವಿಚಾರದಲ್ಲಿ ಈ ಪದ್ಧತಿಯನ್ನನುಸರಿಸುತ್ತಿದ್ದ ಜನಾಂಗಗಳನ್ನು ಆತ ಗುರುತಿಸಿದ್ದಾನೆ. ವ್ಯಕ್ತಿಯನ್ನು ಸಮಷ್ಟಿಯಲ್ಲಿ ಅಂತರ್ಗತಗೊಳಿಸುವ ಪ್ರಯತ್ನದಲ್ಲಿ ಆಸ್ತಿಯ ಸಾಮೂಹಿಕ ಒಡೆತನ ವ್ಯವಸ್ಥೆ ಒಂದು ಅನಿವಾರ್ಯ ಕ್ರಮವಾಗಿತ್ತೆಂದು ಇ.ಡರ್ಖೀಮ್ ವಾದಿಸಿದ್ದಾನೆ. 
ಇತಿಹಾಸಪುರ್ವ ಮಾನವ ಸಮಾಜ ಸ್ವರೂಪವನ್ನು ಕುರಿತು ಮಾರ್ಗನ್ ನಡೆಸಿದ ಸಂಶೋಧನೆಗಳ ಆಧಾರದ ಮೇಲೆ ಮಾಕ್ರ್ಸ್‌-ಎಂಗೆಲ್ಸರು ಈ ಪರಿಕಲ್ಪನೆಗೆ ಹೆಚ್ಚಿನ ಪ್ರಾಮುಖ್ಯ ನೀಡಿದರು. ಪ್ರಾಚೀನ ಕಾಲದಲ್ಲಿದ್ದು ಅನಂತರ ರೂಢಿಚ್ಯುತವಾದ ಮಾನವ ಸಮಾಜದ ಉತ್ಕರ್ಷಕಾಲದಲ್ಲಿದ್ದ ಪದ್ಧತಿಯ ಕಡೆಗೆ ಈಗಿನ ಸಮಾಜವು ಅನಿವಾರ್ಯವಾಗಿ ಸಾಗುತ್ತಿದೆ ಎಂಬುದು ಆದರೆ ಈಗಿನದು ಪ್ರಜ್ಞಾಪುರ್ವಕವಾದ ವಿಕಾಸವೆಂದು ಇದು ಶಾಶ್ವತ ವ್ಯವಸ್ಥೆ ಎಂಬುದು ಇವರ ಭಾವನೆಯಾಗಿತ್ತು. ಈ ಅಭಿಪ್ರಾಯಕ್ಕೆ 20ನೆಯ ಶತಮಾನದ ಮಾನವಶಾಸ್ತ್ರಜ್ಞರನೇಕರು ಅಷ್ಟೇನು ಪ್ರಾಶಸ್ತ್ಯ ನೀಡಲಿಲ್ಲ. ಆದಿಮ ಜನರ ಜೀವನ ಸ್ಥಿತಿಯ ಬಗ್ಗೆ ಸಾಕಷ್ಟು ವಿವರಗಳಿಲ್ಲದೆ ಯಾವುದೇ ಸಮಗ್ರ ಚಿತ್ರವನ್ನು ರೂಪಿಸುವುದು ಸಾಧ್ಯವಿಲ್ಲವೆಂಬುದು ಕೆಲವರ ವಾದ. ಆದರೆ ಸೋವಿಯತ್ ವಿದ್ವಾಂಸರನೇಕರು ಮಾರ್ಗನನ ದೃಷ್ಟಿಯನ್ನು ಎತ್ತಿ ಹಿಡಿದಿದ್ದಾರೆ. ಗುಂಪಿನ ಜೀವನ ಆಸ್ತಿಯ ಸಾಮೂಹಿಕ ಒಡೆತನ-ಇವು ಆರಂಭ ಕಾಲದಲ್ಲಿ ಸಾರ್ವತ್ರಿಕವಾಗಿದ್ದುವೆಂದು ಕ್ರಮೇಣ ಖಾಸಗಿ ಆಸ್ತಿ, ಕೌಂಟುಂಬಿಕ ಜೀವನ ಇವೆಲ್ಲವೂ ಬಂತೆಂದು ಇವರು ವಾದಿಸುತ್ತಾರೆ.

ಕಮ್ಯೂನಿಸಂ ಕುರಿತು ಈಗಿನವರ ಪರಿಕಲ್ಪನೆಗೆ ಅನುಸಾರವಾದ ಒಂದು ಸಮಗ್ರ ವ್ಯವಸ್ಥೆ ಮಾನವನ ನಾಗರಿಕತೆಯ ಇತಿಹಾಸದ ಆರಂಭಕಾಲದಲ್ಲಿ ಇತ್ತೆಂಬುದಾಗಿ ವಾದಿಸಲು ನೀಡಬಹುದಾದ ಆಧಾರಗಳು ಪರಿಪುರ್ಣವಲ್ಲವೆಂದು ಕೆಲವರು ವಾದಿಸಿದರೆ, ಇಂಥ ವ್ಯವಸ್ಥೆ ಇರಲಿಲ್ಲವೆನ್ನುವುದಕ್ಕೂ ಆಧಾರಗಳು ಅಷ್ಟೆ ಅಪರಿಪುರ್ಣವೆಂದು ಇನ್ನೂ ಕೆಲವರು ವಾದಿಸುತ್ತಾರೆ. ಈಗಲೂ ವಿಶ್ವದ ಹಲವೆಡೆಗಳ ಆದಿವಾಸಿ ಜನಾಂಗಗಳಲ್ಲಿರುವ ನಾನಾ ಪದ್ಧತಿಗಳಲ್ಲಿ ಕೆಲವನ್ನು ಆದಿಮ ಕಮ್ಯೂನಿಸಂ ಸಮರ್ಥನೆಗೆ ಉದಾಹರಿಸಬಹುದಾದರೆ ಇನ್ನೂ ಕೆಲವನ್ನು ಅದಕ್ಕೆ ವಿರುದ್ಧವಾದ ಪ್ರತಿಪಾದನೆಗೂ ಉದಾಹರಿಸಬಹುದಾಗಿದೆ. ಈ ಬಗ್ಗೆ ಇದಮಿತ್ಥಂ ಎಂದು ನಿರ್ಣಯ ನುಡಿಯುವುದು ಅಸಾಧ್ಯ.       (ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ